Monday, 5 September 2016

ಅನುವಾದಿತ ಕೃತಿ - ಮೂಗುಬೊಟ್ಟು – ಓಲ್ಗಾ (ತೆಲುಗಿನಿಂದ)

 [ಪ್ರಪಂಚದ ಎಲ್ಲಾ ಭಾಷೆಗಳಲ್ಲಿ ಬಂದ ಉತ್ತಮ ಸಾಹಿತ್ಯ ಕೃತಿಗಳಲ್ಲಿ ಕೆಲವನ್ನಾದರೂ ಅನುವಾದಿಸಿ ನಮ್ಮ ಓದುಗರಿಗೆ ನೀಡಬೇಕೆಂಬುದು ನಮ್ಮ ಇಚ್ಛೆ. ಈ ರೀತಿಯಾಗಿ ಎಲ್ಲಾ ಭಾಷೆಗಳ ಸೊಗಡನ್ನು ಆಸ್ವಾದಿಸಬಹುದು. ಈ ಬಾರಿ ತೆಲುಗಿನ ಸುಪ್ರಸಿದ್ಧ ಲೇಖಕಿಯವರಾದ ಓಲ್ಗಾರವರ  “ಮೂಗುಬೊಟ್ಟು” (ರಾಜಕೀಯ ಕಥಲು ಕಥಾಸಂಕಲನದಿಂದ ಆರಿಸಿದ ಕಥೆ) ಎಂಬ ಕಥೆಯ ಅನುವಾದವನ್ನು ನೀಡುತ್ತಿದ್ದೇವೆ. ಓದುಗರಿಗೆ ಕಥೆ ಉತ್ತಮವೆನಿಸಿದರೆ ಅದರ ಕೀರ್ತಿ ಮೂಲ ಲೇಖಕರಿಗೆ ಸೇರುತ್ತದೆ. ಉತ್ತಮವಲ್ಲವೆನಿಸಿದರೆ ಅದು ಅನುವಾದಕರ ಜವಾಬ್ದಾರಿಯಾಗಿರುತ್ತದೆ] 
ಮತ್ತೆ ಗಂಡಿನ ಕಡೆಯವರು ಬರುತ್ತಾರಂತೆ. ರಮಳಿಗೆ ತನ್ನೊಳಗೆ ಏನೋ ಗಡ್ಡೆಕಟ್ಟುತ್ತಿರುವಂತೆ ಅನಿಸುತ್ತಿದೆ. ಆಗಲೇ 6 ವರ್ಷಗಳಾಗಿದೆ. ವರ್ಷಕ್ಕೆ 5-6 ಸಾರಿಗಿಂತ ಕಡಿಮೆಯೆನ್ನದೆ, ಗಂಡುಗಳು ಬರುತ್ತಲೇ ಇದ್ದಾರೆ. ರಮ ಪಿಯುಸಿ 2ನೇ ವರ್ಷದಲ್ಲಿರುವಾಗಲೇ ಇದು ಆರಂಭವಾಗಿದೆ.  ರಮ ಬಿಎ ಪಾಸಾಗಿ 2 ವರ್ಷದಿಂದ ಕೆಲಸ ಮಾಡುತ್ತಿದ್ದಾಳೆ. 
ರಮ ನೋಡಲು ಚೆನ್ನಾಗಿಯೇ ಇದ್ದಾಳೆ. ಗೋಧಿಬಣ್ಣ. ಕಳೆ ಇರುವ ಮುಖ. ಮೂಗು ಸ್ವಲ್ಪ ದೊಡ್ಡದಾದರೂ ಉದ್ದವಾಗಿರುವ ಚಂದದ ಮೂಗು ಎನಿಸಿಕೊಳ್ಳುವುದಿಲ್ಲ. ಉದ್ದ ಜಡೆ, ಎತ್ತರಕ್ಕೆ ತಕ್ಕ ದಪ್ಪ, ಚೆನ್ನಾಗಿಯೇ ಇದ್ದಾಳೆ ರಮ.
ಆದರೆ ವಾಸ್ತವ ಸಮಸ್ಯೆ ಬೇರೆಯೇ ಇದೆ. ಬಂದು ಹೋದವರಿಗೆಲ್ಲ ಹುಡುಗಿ ಇಷ್ಟವಾಗಲಿಲ್ಲ ಅಂತಲ್ಲ. ಹುಡುಗಿ ಇಷ್ಟವಾದಳಾ ಇಲ್ಲವಾ ಎನ್ನುವುದು ಬಹಳ ಕಡಿಮೆ ಸಾರಿ ಬರುತ್ತದೆ. ಇಷ್ಟವಾಗದಿರುವುದು ರಮ ತಂದೆ ಕೊಡುವ ವರದಕ್ಷಿಣೆಯಲ್ಲಿಯೇ. ನಿಜವಾದ ಸಮಸ್ಯೆ ಅದು.
ಸಮಸ್ಯೆ ಏನೆಂದು ಅರ್ಥವಾದರೆ, ನಿಜವಾದ ಸಮಸ್ಯೆ ಎಲ್ಲಿದೆಯೊ ಗುರ್ತಿಸಿದರೆ ಪ್ರಪಂಚದಲ್ಲಿ ಸಮಸ್ಯೆಗಳಿಗೆಲ್ಲ ಸರಳವಾಗಿಯೇ ಉತ್ತರ ಸಿಗುತ್ತದೆ. 
ಒಂದು ಸಮಸ್ಯೆಗೆ ಎಷ್ಟೋ ವಿಧದ ಕೋನಗಳು, ಛಾಯೆಗಳು. ಸಮಸ್ಯೆ ಒಂದು ಕಡೆ ಇದ್ದರೆ ಅದರ ನೆರಳು ಇನ್ನೊಂದು ಕಡೆ ಕಾಣಿಸಿಕೊಳ್ಳುತ್ತದೆ. ನೆರಳನ್ನೇ ನಾವು ಸಮಸ್ಯೆ ಎಂದುಕೊಂಡು ನಾವು ಅದನ್ನು ಹಿಡಿದುಕೊಳ್ಳಲೆತ್ನಿಸುತ್ತೇವೆ. ಹಾಗೆಯೇ ರಮಳ ಮದುವೆ ಸಮಸ್ಯೆ ಕೂಡ ಅವಳ ಮೂಗಿನ ಮೇಲೆ ನಿಂತಿತು.
ರಮಗೆ ಚಿಕ್ಕಂದಿನಲ್ಲಿ ಅವರ ಅಜ್ಜಿ, ಕಿವಿಗಳ ಜೊತೆಗೆ ಮೂಗು  ಚುಚ್ಚಿಸಿದರು. ಮೂರು ವರ್ಷದ ರಮ ಜೋರಾಗಿ ಅಳುತ್ತಾ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಳು, ಆದರೆ ಸಾಧ್ಯವಾಗಲಿಲ್ಲ. ಮೂಗು ಚುಚ್ಚಿದರು. ರಮ ಹಿಂದೆ ಬರಲು ಪ್ರಯತ್ನಿಸಿದ್ದರಿಂದ ಎರಡು ಕಡೆ ತೂತುಗಳು ಬಿದ್ದವು. ಮತ್ತೆ ಅಜ್ಜಿ ರಮಳ ಕಾಲು ಕೈಗಳನ್ನು ಒತ್ತಿ ಹಿಡಿದರೆ, ಎರಡೂ ತೂತುಗಳನ್ನು ಸೇರಿಸಿ, ಒಂದು ದೊಡ್ಡ ತೂತು ಮಾಡಿದ ಮೂಗು ಹೊಲಿಯುವ ಹುಡುಗ.
ನಂತರ ಕಿವಿಗಾದ ಗಾಯ ಬೇಗ ವಾಸಿಯಾಯಿತು ಆದರೆ ಮೂಗು ವಾಸಿಯಾಗಲಿಲ್ಲ. ಜ್ವರ ಬಂದಿತು. ಹದಿನೈದು ದಿನಗಳು ಮಗುವನ್ನು ಹಿಂಡಿ ಹಿಪ್ಪೆ ಮಾಡಿದ ನಂತರ ಜ್ವರ ವಾಸಿಯಾಯಿತು.
ಅಜ್ಜಿ ತನ್ನ ಮೂಗುಬೊಟ್ಟು ರಮನಿಗೆಂದು ಹೇಳಿಬಿಟ್ಟಳು. ರಮನಿಗೆ 10 ವರ್ಷವಿದ್ದಾಗ ಅಜ್ಜಿ ಸತ್ತರೆ, ಅದನ್ನು ರಮನ ಮೂಗಿಗಿಟ್ಟಳು ಅವಳ ತಾಯಿ. ಶಾಲೆಯಲ್ಲಿ ಎಲ್ಲರೂ ಆಡಿಕೊಂಡರೆಂಬ ಕಾರಣದಿಂದ ಅದನ್ನು ತೆಗೆದು ಪೆಟ್ಟಿಗೆಯಲ್ಲಿಟ್ಟಳು ರಮ. 
ಆದರೆ ಮೂಗಿನಲ್ಲಿ ತೂತು ಹಾಗೆಯೇ ಇತ್ತು. ಅಲ್ಲಿ ಬಿದ್ದ ಕಪ್ಪು ಮಚ್ಚೆ ಕೂಡ ಹಾಗೆಯೇ ನಿಂತುಬಿಟ್ಟಿತು. ರಮ ಕಾಲೇಜಿನಲ್ಲಿ ಸೇರುವಾಗ ಮೂಗುಬೊಟ್ಟು ಹಳೆಯದಾಯಿತು. ಅವಳ ಜೊತೆಯವರಾರೂ ಮೂಗು ಚುಚ್ಚಿಸಿಕೊಂಡಿರಲಿಲ್ಲ.
ಬಹಳಷ್ಟು ಜನ ರಮಳ ಮೂಗನ್ನು, ಅಲ್ಲಿದ್ದ ಮಚ್ಚೆಯನ್ನು ಅದೇ ಕೆಲಸವಾಗಿ ನೋಡುತ್ತಿದ್ದರು. ಅದೊಂದೇ ಕಣೇ ದೃಷ್ಟಿಬೊಟ್ಟು ಎನ್ನುತ್ತಿದ್ದರು.
“ಅದು ಇದ್ದರೆ ಏನೀಗ, ಗಾಳಿ ತೆಗೆದುಕೊಳ್ಳಲಂತೂ ಏನೂ ಅಡ್ಡಿ ಇಲ್ಲ. ವಾಸನೆ ನೋಡಲು ಅಡ್ಡಿ ಇಲ್ಲ. ಮೂಗಿಗೆ ಸಂಬಂಧಿಸಿದ ಏನೂ ಖಾಯಿಲೆ ಇಲ್ಲ. ಕನಿಷ್ಟ ನಾಲ್ಕು ವರ್ಷಕ್ಕೊಮ್ಮೆ ನೆಗಡಿಯೂ ಆಗದು, ನನ್ನ ಮೂಗಿಗೇನು, ಅದು ಬಂಗಾರ” ಎನ್ನುತ್ತಿದ್ದಳು ರಮ.
“ಉಳಿದವಕ್ಕೆ ಅಡ್ಡಿಯಾಗುವುದಿಲ್ಲ ನಿಜ, ಆದರೆ ನಾಳೆ ನಿನ್ನ ಮದುವೆಗೆ ಅಡ್ಡ ಬರುತ್ತದೆ ನೋಡುತ್ತಿರು” ಎಂದಳು ಶೈಲ.
ಶೈಲಳನ್ನು ಎಲ್ಲರು ’ಚಪ್ಪಟ್ಟೆ ಮೂಗ” ಎನ್ನುತ್ತಿದ್ದರು.
ಶೈಲ ಅಂತಾನೇ ಅಲ್ಲ, ಎಲ್ಲರೂ ತಮ್ಮ ಅಂಗಾಂಗಗಳನ್ನು – ಮುಖ್ಯ ಮುಖ – ಎಲ್ಲಾ ರೀತಿಯಲ್ಲೂ ಸರಿಯಾಗಿದೆಯಾ, ಇಲ್ಲವೊ ಎಂದು ಪರೀಕ್ಷಿಸಿಕೊಳ್ಳುತ್ತಿದ್ದರು. ಅದರ ಭಾಗವಾಗಿ ಮೂಗಿನ ಬಗ್ಗೆಯೂ ಭಯಪಡುತ್ತಿದ್ದರು. ಒಬ್ಬಳು ಹುಡುಗಿಗೆ ಮೂಗು ಉದ್ದ ಎಂದು ಯೋಚನೆಯಾದರೆ, ಇನ್ನೊಬ್ಬಳಿಗೆ ದಪ್ಪವಾಗಿದೆ ಎಂದು ಭಯ. ಇನ್ನೊಬ್ಬಳಿಗೆ ಅದು ಸೊಟ್ಟ ಎಂದು ಭಯ. ಇನ್ನೊಬ್ಬಳಿಗೆ ಅದು ಕೆಳಗೆ ವಾಲಿದೆ ಎಂದು ಭಯ. ಎಲ್ಲರ ಮನಸ್ಸಲ್ಲಿ ಒಂದು ಮೂಗು ಇದ್ದೇ ಇತ್ತು.
ನೀಳವಾಗಿ, ಸಣ್ಣದಾಗಿ, ಸೂಜಿಯಂತೆ ಇರುವ ಮೂಗು ಕವಿಗಳು ವರ್ಣಿಸುವ ಮೂಗು.
“ಅಂತಹ ಮೂಗಿದ್ದರೆ ಎಷ್ಟು ಚೆನ್ನ” ಎಂದಳು ಮಲ್ಲಿಕ, ತೆಲುಗು ಮೇಷ್ಟ್ರು ಮೂಗು ಕವಿತೆಯನ್ನು ಓದಿ ವರ್ಣಿಸಿದಾಗ.
ಸಂಪಂಗಿ ಮೊಗ್ಗಿನ ತರಹದ ಮೂಗು.
ಕಥೆಯಲ್ಲಿ ಕಾದಂಬರಿಗಳಲ್ಲಿ ನಾಯಕಿಯರಿಗಿರುವ ಸುಂದರ ಮೂಗು.
ತಮಗಿಲ್ಲದ ಆ ಮೂಗಿನ ಬಗ್ಗೆ ಯೋಚಿಸುತ್ತಲೇ ಹೆಣ್ಣುಮಕ್ಕಳು ತಮ್ಮ ಮೂಗಿನ ಮೇಲೆ ಅಸಂತೃಪ್ತಿ ಬೆಳೆಸಿಕೊಳ್ಳುವುದನ್ನು ನೋಡಿ ರಮಾಗೆ ಕೋಪ. ಆದರೆ ತನ್ನ ಮೂಗೇ ತನಗೆ ಸಮಸ್ಯೆಯಾಗುತ್ತದೆಂದು ನಿಧಾನವಾಗಿ ಆಕೆಗೆ ತಿಳಿಯಿತು.
ಸಾಲಾಗಿ ನಾಲ್ಕು ಗಂಡಿನ ಕಡೆಯವರು ರಮಳ ಮೂಗಿನ ಬಗ್ಗೆ, ಆ ಮಚ್ಚೆಯ ಬಗ್ಗೆ ಮಾತಾಡುವಷ್ಟರಲ್ಲೇ ಮನೆಯಲ್ಲಿ ಎಲ್ಲರಿಗೂ ಭಯ ಹುಟ್ಟಿಕೊಂಡಿತು.
ಮೂಗು ಚುಚ್ಚಿಸಿದ ಅಜ್ಜಿಗೆ ಶಾಪ ಹಾಕಿದರು ರಮಾ ತಾಯಿ.
ಐದನೇ ಗಂಡಿನ ಕಡೆಯವರು, “ಹಣದಲ್ಲೇನಿದೆ ಬಿಡಿ. ನಮ್ಮ ಹುಡುಗನಿಗೆ ಸೌಂದರ್ಯ ಮುಖ್ಯ. ನಿಮ್ಮ ಹುಡುಗಿಯದು ಗೋಧಿ ಬಣ್ಣ. ಮೇಲಾಗಿ ಮೂಗಿನ ಮೇಲೆ ಅದೊಂದು” ಅಂತ ಹೇಳಿದ ಮೇಲೆ, ಆ ತೂತನ್ನು ಹೇಗಾದರೂ ಮುಚ್ಚಿಸಿಬಿಡಬೇಕೆಂದುಕೊಂಡರು ಅವರ ತಂದೆ.
ರಮ 2ನೇ ಬಿ ಎ ಓದುತ್ತಿರುವಾಗ ಗುಂಟೂರಿನ ದೊಡ್ಡ ಸರ್ಜನ್ ಹತ್ತಿರ ಹೋಗಿ ಆ ಮಚ್ಚೆ ಇಲ್ಲದಂತೆ ಸರ್ಜರಿ ಮಾಡಿಸಿದರು ರಮಳಿಗೆ.
ಮಚ್ಚೆಯಿಲ್ಲದ ಮೂಗು ತನ್ನನ್ನು ಎಕ್ಕರಿಸುತ್ತಿರುವಂತೆ ಅನಿಸಿತು ರಮಗೆ
ವರ್ಷಗಳಗಟ್ಟಲೆ ಅಭ್ಯಾಸವಾಗಿದ್ದ ಆ ಮಚ್ಚೆ ರಮಾಳ ಶರೀರದ ಭಾಗವಾಗಿಬಿಟ್ಟಿತ್ತು. ಅದಿಲ್ಲದಿದ್ದರೆ ಕೆಲವೊಮ್ಮೆ ರಮಾಗೆ ಏನೋ ಕಳೆದುಕೊಂಡಂತೆನಿಸಿತ್ತು.
’ಆದರೂ ಸಹ, ಹೋಗಲಿ ಬಿಡು, ಇನ್ನೇನೂ ಕೊಂಕು ತೆಗೀತಾರೆ” ಅಂದುಕೊಂಡಳು.
ಸ್ನೇಹಿತೆಯರೆಲ್ಲ ಸಂತೋಷಿಸಿದರು. “ಇನ್ನು ನಿನ್ನ ಮದುವೆ ಆಗಿಬಿಡುತ್ತದೆ ಬಿಡು” ಎಂದರು. 
ಮದುವೆಗಾಗಿ ಹೆಣ್ಣುಮಕ್ಕಳು ಸಾಧ್ಯವಾದರೆ ತಮ್ಮ ಪ್ರತಿಯೊಂದು ಅಂಗವನ್ನೂ ಬದಲಾಯಿಸಿಕೊಂಡುಬಿಡಬೇಕೇನೊ ಆ ಹುಡುಗನ ಕಡೆಯವರಿಗೆ ಇಷ್ಟವಾಗುವಂತೆ ಎಂದುಕೊಂಡಳು ರಮ.
ಬೆಳ್ಳಗಿದ್ದ ಶೋಭಾಳನ್ನು “ಅದೇನು ಬಿಳುಪಮ್ಮ, ಹುಚ್ಚು ಬಿಳುಪು, ಒಂಚೂರು ಕಳೆಕಾಂತಿ ಇಲ್ಲ” ಎಂದರು.
ತಮ್ಮ ಎದುರಿಗೆ ಒಂದು ಹೆಣ್ಣುಮಗಳು ಮದುವೆಗಾಗಿ ಕುಳಿತುಕೊಂಡಿದ್ದಾಳೆಂದರೆ ಹುಡುಗನ ಕಡೆಯವರ ಕಣ್ಣುಗಳಿಗೆ ಏನೋ ಖಾಯಿಲೆ ಬರುತ್ತದೆಂದು ರಮನಿಗೆ ದೃಢ ನಂಬಿಕೆ ಬಂದುಬಿಟ್ಟಿತು.
ರಮಳ ಬಿಎ ಮುಗಿಯಿತು. 2 ವರ್ಷದಿಂದ ಟೈಪಿಸ್ಟ್ ಕೆಲಸ ಮಾಡುತ್ತಿದ್ದಾಳೆ. ಆದರೂ ಸಂಬಂಧ ಕುದುರಲಿಲ್ಲ. ಪ್ರಯತ್ನಗಳು ನಿಲ್ಲಲಿಲ್ಲ. ಆ 2 ವರ್ಷಗಳಲ್ಲಿ ಒಬ್ಬಳು ಸಿನಿಮಾ ತಾರೆಂiÀi ದೆಸೆಯಿಂದ ಮೂಗುಬೊಟ್ಟು ಮತ್ತೆ ¥sóÁ್ಯಷನ್ ಆಯಿತು. ಹೆಣ್ಣುಮಕ್ಕಳೆಲ್ಲ ಮೂಗು ಚುಚ್ಚಿಸಿಕೊಳ್ಳಲಾರಂಭಿಸಿದರು. ತನ್ನ ಮೂಗಿನ ತೂತನ್ನು ನೋಡಿ ನಕ್ಕವರೆಲ್ಲ ಈಗ ಮೂಗು ತೂತು ಮಾಡಿಕೊಳ್ಳುತ್ತಿದ್ದರೆ ರಮಾಗೆ ಆಶ್ಚರ್ಯವಾಯಿತು.
ಇಂದು ಬರುತ್ತಿರುವ ಸಂಬಂಧದ ಬಗ್ಗೆ ಎಲ್ಲರಿಗೂ ಆಶೆಯಿದೆ. ಹುಡುಗ ಕಾಲೇಜಿನಲ್ಲಿ ಉಪನ್ಯಾಸಕ. ವರದಕ್ಷಿಣೆ 25000 ಸಾಕೆಂದು ಒಪ್ಪಿಕೊಂಡಿದ್ದಾನೆ.  ಹುಡುಗನಿಗೆ ಒಬ್ಬಳೇ ಅಕ್ಕ. ಆ ಅಕ್ಕ ಮೂರು ವರ್ಷದಿಂದ ರಮ್ಮಾಳ ಮನೆಯ ಪಕ್ಕದಲ್ಲಿ ಬಾಡಿಗೆಗಿದ್ದಾರೆ. ಅವಳ ಹೆಸರು ಸಾವಿತ್ರಿ. ಸಾವಿತ್ರಿ ತಾನೇ ಮುಂದೆ ಬಂದು ಈ ಸಂಬಂಧ ಬಹಳಷ್ಟರವರೆಗೆ ಖಾಯಂ ಎನ್ನುವಂತೆ ಆಗಿತ್ತು. ಹುಡುಗನ ¥sóÉÇೀಟೊ ಹುಡುಗಿ, ಹುಡುಗಿ ¥sóÉÇೀಟೊ ಹುಡುಗ ನೋಡಿದ್ದರು. ಹುಡುಗ ಒಂದೆರಡು ಬಾರಿ ಸಾವಿತ್ರಿಯ ಮನೆಗೆ ಬಂದಾಗ ರಮಾ ಹಠಾತ್ತಾಗಿ ಕಾಣಿಸಿಕೊಂಡು ಮಾಯವಾಗಿದ್ದಳು ಕೂಡ. ಹುಡುಗ ಸತ್ಯನಾರಾಯಣ ನಾಮಕಾವಸ್ತೆಗೆ ನೋಡಲು ಬರಬೇಕಿತ್ತಷ್ಟೇ ಹೊರತು ಹುಡುಗಿ ಬೇಡವೆನ್ನಲು ಅಲ್ಲ ಎಂಬುದು ಎಲ್ಲರ ನಂಬಿಕೆಯಾಗಿತ್ತು.
ಆದರೂ ಎಲ್ಲರಲ್ಲಿ ಏನೋ ಭಯ.
“ಇನ್ನು ಸ್ವಲ್ಪ ಬಣ್ಣವಿದ್ದಿದ್ದರೆ ಇಷ್ಟು ಸಮಸ್ಯೆ ಇರುತ್ತಿರಲ್ಲಿಲ”್ಲ ಗೊಣಗಿಕೊಂಡಳು ತಾಯಿ.
ರಮಾಗೆ ಹೆಚ್ಚಿನ ಉತ್ಸಾಹ ಇರಲಿಲ್ಲ. ಮಾಮೂಲಾಗಿ ತಯಾರಾಗುವಂತೆಯೇ ಸಿದ್ಧಳಾದಳು. ಎಲ್ಲ ಮುಗಿಯಿತು. ಅವರು ಸಂತೋಷವಾಗಿಯೇ ಹೋದರು. ಹತ್ತು ದಿನಗಳಲ್ಲಿ ನಿಶ್ಚಿತಾರ್ಥಕ್ಕೆ ಸಿದ್ಧಮಾಡುವಂತೆ ಹೇಳಿದರು. ರಮಾಗೆ ತಲೆಯ ಮೇಲಿಂದ ಭಾರವಿಳಿದಂತೆನಿಸಿತು. ಚೆನ್ನಾಗಿ ಊಟ ಮಾಡಿ ಸಾಯಂಕಾಲದವರೆಗೆ ನಿದ್ದೆ ಮಾಡಿದಳು. ಐದು ಘಂಟೆಗೆ ಸಾವಿತ್ರಿ ಬಂದು ಎಬ್ಬಿಸಿದಳು.
“ಎದ್ದೇಳು, ನಿದ್ದೆಯಲ್ಲಿ ನನ್ನ ತಮ್ಮನನ್ನು ಮೀರಿಸುವಂತಿದ್ದೀಯಾ” ಎನ್ನುತ್ತಾ.
ರಮಾ ನಾಚಿಕೆಪಡುತ್ತಾ ಎದ್ದಳು
“ಈಗ ನೀನು ಅರ್ಜೆಂಟಾಗಿ ಮಾಡಬೇಕಾದ ಕೆಲಸವೊಂದಿದೆ” ಎಂದಳು ಸಾವಿತ್ರಿ.
“ಏನು?” ಎಂದಳು ರಮ ಆಕಳಿಸುತ್ತಾ. “ಮೂಗು ಚುಚ್ಚಿಸಿಕೊಳ್ಳಬೇಕು.”
ಆಕಳಿಗೆ ಮುಗಿದರೂ ರಮಳ ಬಾಯಿ ಮುಚ್ಚಿಕೊಳ್ಳಲಿಲ್ಲ.
“ನನ್ನ ತಮ್ಮನಿಗೆ ಮೂಗುಬೊಟ್ಟು ಎಂದರೆ ಬಹಳ ಇಷ್ಟ. ಮೂಗುಬೊಟ್ಟು ಇಲ್ಲದ ಹೆಣ್ಣುಮಗಳ ಮೂಗಿಗೆ ಅಂದವೇ ಇರುವುದಿಲ್ಲವಂತೆ. ಎಲ್ಲಾ ಚೆನ್ನಾಗಿದೆ ಆದರೆ ಆ ಹುಡುಗಿಗೆ ಮೂಗುಬೊಟ್ಟೇ ಇಲ್ಲಕ್ಕ ಅಂದ. ಅದೆಷ್ಟು ಕೆಲಸವೊ ಎಂದೆ ನಾನು. ನಿನಗೆ 20000ಕ್ಕಿಂತ ಕಡಿಮೆಯಾಗದ ಮೂಗುಬೊಟ್ಟು ಮಾಡಿಸುತ್ತಾನಂತೆ. ಅದೃಷ್ಟ ಎಂದರೆ ನಿನ್ನದೇ ನೋಡು. ಎದ್ದೇಳು, ಮೂಗು ಚುಚ್ಚಿಸಿಕೊಂಡುಬರೋಣ ನಡೆ” ಎಂದು ಸಾವಿತ್ರಿ ಬೇಗಬೇಗ ಮಾತನಾಡಿದಳು.
“ನಾನು ಮೂಗು ಚುಚ್ಚಿಸಿಕೊಳ್ಳುವುದಿಲ್ಲ. ಈ ಮದುವೆ ನಿಂತುಹೋದರೂ ಸರಿಯೇ” ರೋಷದಿಂದ ಕೋಪದಿಂದ ರಮಳ ಮೂಗು ಅದುರುತ್ತಿತ್ತು.
ಅವು ಅಂದವಾಗಿದ್ದವೊ ಇಲ್ಲವೊ ಹೇಳುವರಾರು!!      

No comments:

Post a Comment