Monday, 5 September 2016

ವಿಹಂಗಮ ನೋಟ - ಕೊಡಗಿನ ಗೌರಮ್ಮನವರ ಕಂಬನಿ ಮತ್ತು ಚಿಗುರು


{ಪ್ರತಿ ಸಂಚಿಕೆಯಲ್ಲೂ ಒಂದು ಉತ್ತಮ ಸಾಹಿತ್ಯ ಕೃತಿ ಅಥವಾ ಸಿನಿಮಾದ ಬಗ್ಗೆ ವಿಶ್ಲೇಷಣೆಯನ್ನು ಈ ಅಂಕಣದಲ್ಲಿ ನೀಡುತ್ತೇವೆ. ಈ ಬಾರಿ ಕನ್ನಡದ ಖ್ಯಾತ ಲೇಖಕಿಯವರಾದ ಕೊಡಗಿನ ಗೌರಮ್ಮನವರ “ಕಂಬನಿ ಮತ್ತು ಚಿಗುರು” – ಕಥಾಸಂಕಲನದ ಬಗ್ಗೆ ಬರೆಯುತ್ತಿದ್ದೇವೆ}
ಪುನರ್ವಿವಾಹ : ಪತ್ನಿಯನ್ನು ಕಳೆದುಕೊಂಡು ದುಃಖದಲ್ಲಿದ್ದ 35 ವರ್ಷದ ಶ್ರೀಮಂತ ವಿಧುರನೊಬ್ಬನು ತನ್ನ ತಾಯಿ ಹಾಗು ಪುಟ್ಟ ಮಗಳೊಂದಿಗೆ ವಾಸಿಸುತ್ತಿದ್ದನು. ಆತನನ್ನು ಅಳಿಯನನ್ನಾಗಿ ಮಾಡಿಕೊಳ್ಳುವ ಕನ್ಯಾಪಿತೃಗಳಿಗೇನೂ ಕೊರತೆ ಇರಲಿಲ್ಲ. ಜೊತೆಗೆ ಪುಟ್ಟ ಮಗಳ ಲಾಲನೆ-ಪಾಲನೆಗಾಗಿಯಾದರೂ ಮರುವಿವಾಹವಾಗಬಾರದೇ ಎಂದು ತಾಯಿಯ ಒತ್ತಾಯ ಬೇರೆ. ಇದ್ಯಾವುದಕ್ಕೂ ಮಣಿಯದೆ, ಏನೇ ಆದರೂ ಪುನರ್ವಿವಾಹವಾಗಲಾರೆ ಎಂದು ನಿಶ್ಚಯಿಸಿದ್ದನು. ಆದರೆ ಕೇವಲ ಮೂರ್ನಾಲ್ಕು ತಿಂಗಳುಗಳು ಕಳೆಯುವಷ್ಟರಲ್ಲಿ ಅವನ ಕಣ್ಣಿಗೆ 15 ವರ್ಷದ ಮುದ್ದು ಮುಖದ ಬಾಲೆ ರಾಜಿಯ ದರುಶನವಾಗಿ ತನ್ನ ನಿಲುವನ್ನು ಬದಲಿಸಿಕೊಂಡು ರಾಜಿಯೊಂದಿಗಿನ ಪುನರ್ವಿವಾಹಕ್ಕೆ ಸಿದ್ಧನಾಗುತ್ತಾನೆ, ಬಡ ವಿಧವೆಯಾದ ರಾಜಿಯ ತಾಯಿಯೂ ಇದಕ್ಕೆ ಸಮ್ಮತಿಸುತ್ತಾರೆ. ಆದರೆ ಈ ಮದುವೆಯ ಬಗ್ಗೆ ರಾಜಿಯ ಅಭಿಪ್ರಾಯವೇನೆಂಬುದನ್ನು ತಿಳಿಯದ ಆ ವಿಧುರನು, ತಾನೊಬ್ಬ ಶ್ರೀಮಂತನಾದ್ದರಿಂದ ರಾಜಿಯು ತನ್ನನ್ನು ತಿರಸ್ಕರಿಸಲು ಸಾಧ್ಯವಿಲ್ಲವೆಂಬುದು ಆತನ ಧೋರಣೆ. ಆದರೆ ರಾಜಿಗೆ ಈ ಮದುವೆ ಇಷ್ಟವಿರುವುದಿಲ್ಲ, ಹಾಗಾಗಿ ಒಮ್ಮೆ  ಆ ವಿಧುರನೊಂದಿಗೆ ಏಕಾಂತವಾಗಿ ಮಾತನಾಡುವ ಆಹ್ವಾನ ನೀಡುತ್ತಾಳೆ. ರಾಜಿಯ ಅಭಿಪ್ರಾಯ ತಿಳಿಯದ ವಿಧುರನು ಆಕೆಯನ್ನು ಬಹಳವಾಗಿ ಪ್ರೀತಿಸುತ್ತಿರುವುದಾಗಿ, ರಾಣಿಯ ಹಾಗೆ ನೋಡಿಕೊಳ್ಳುವುದಾಗಿಯೂ ಉದ್ದದೊಂದು ಭಾಷಣ ಬಿಗಿಯುತ್ತಾನೆ. ಆತನ ಮಾತುಗಳನ್ನು ಆಲಿಸಿದ ರಾಜಿಯು ತಾನೊಬ್ಬ ಬಾಲವಿಧವೆ ಎಂದಾಕ್ಷಣ ಆ ವಿಧುರನಿಗೆ ರಾಜಿಯ ಮೇಲಿದ್ದ ಪ್ರೀತಿಯೆಲ್ಲ ಕರಗಿ ಹೋಗಿ, ರಾಜಿಯನ್ನು ಅವಹೇಳನ ಮಾಡಿ ಆಕೆಯೊಂದಿಗಿನ ಮದುವೆಯನ್ನು ತಿರಸ್ಕರಿಸುತ್ತಾನೆ. ಆಗ ರಾಜಿಯು ಆತನಿಗೆ ಸರಿಯಾಗಿ ಪಾಠ ಕಲಿಸುತ್ತಾಳೆ. ಹೆಣ್ಣಿನ ಬಗೆಗಿನ ಆತನ ಧೋರಣೆಯನ್ನು ಬದಲಾಗುವಂತೆ ಮಾಡಿ, ಅವನು ಇನ್ನು ತನ್ನ ಉಳಿದ ಜೀವನವನ್ನು ವಿಧವೆಯರ ಉದ್ಧಾರಕ್ಕಾಗಿ ಮೀಸಲಿಡುತ್ತೇನೆ ಎಂದು ಹೇಳಿ ರಾಜಿಯ ಕಾಲಿಗೆ ಬಿದ್ದು ಕ್ಷಮೆ ಯಾಚಿಸುವ ಮಟ್ಟಿಗೆ ತನ್ನ ಮಾತುಗಳಿಂದ ಆತನಲ್ಲಿ ಪರಿವರ್ತನೆಯುಂಟಾಗುವಂತೆ ಮಾಡುತ್ತಾಳೆ. 
ಅಪರಾಧಿ ಯಾರು? : ಹಳ್ಳಿಯೊಂದರ ಬಡ ಪಂಡಿತರ ಮಗಳಾದ ಪಾರ್ವತಿಯು ಗಂಡನನ್ನು ಕಳೆದುಕೊಂಡು ತನ್ನ ಮಗುವಿನ ಪೆÇೀಷಣೆಗಾಗಿ ಊರಿನ ಮುಖಂಡನಾದ ನಾಗೇಶರಾಯನ ಮನೆಗೆ ಅಡುಗೆಯವಳಾಗಿ ಕೆಲಸಕ್ಕೆ ನಿಲ್ಲುತ್ತಾಳೆ. ತನ್ನ ಮನೆಗೆ ಬಂದ ಪಾರ್ವತಿಯ ಅಸಹಾಯಕತೆಯನ್ನು ಬಳಸಿಕೊಂಡು ಆಕೆಯ ಮೇಲೆ ಅತ್ಯಾಚಾರವೆಸಗಿದ್ದೂ ಅಲ್ಲದೆ, ಅಪನಿಂದನೆಗಳನ್ನು ಹೇರಿ ಜಾತಿಬಹಿಷ್ಕಾರ ಹಾಕಿ ಆಕೆಯನ್ನು ಮನೆಯಿಂದ ಹೊರಗಟ್ಟುತ್ತಾನೆ ನಾಗೇಶರಾಯ. ಇದರಿಂದ ನೊಂದ ಪಾರ್ವತಿಯು ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ಗೈಬಿ ಎಂಬ ಮುಸಲ್ಮಾನ ಮಹಿಳೆ ಪಾರ್ವತಿಯನ್ನು ರಕ್ಷಿಸಿ ಪಾರ್ವತಿಯ ಶಾಲಾ ಗೆಳತಿ ಉನ್ನೀಸಾಳ ಮನೆಗೆ ಕರೆತರುತ್ತಾಳೆ. ಉನ್ನೀಸಾ ಪಾರ್ವತಿಗೆ ಆಶ್ರಯ ನೀಡಿ ರಕ್ಷಿಸುತ್ತಾಳೆ. ತನ್ನ ಈ ದುಸ್ಥಿತಿಗೆ ಕಾರಣವಾದ ಇಂತಹ ಜಾತಿಯಲ್ಲಿದ್ದು ಏನು ಪ್ರಯೋಜನ ಎಂದುಕೊಂಡು ಪಾರ್ವತಿಯು, ತನ್ನ ಮಗುವಿಗಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು, ‘ರಜಿಯಾ’ ಎಂಬ ಹೊಸ ಹೆಸರಿನೊಂದಿಗೆ ತನ್ನ ಮುಂದಿನ ಜೀವನವನ್ನು ಪ್ರಾರಂಭಿಸುತ್ತಾಳೆ. ಕೆಲವು ದಿನಗಳ ನಂತರ - “ಹಿಂದೂ ಮಹಿಳೆಯೊಬ್ಬಳು ಮುಸಲ್ಮಾನ ಧರ್ಮವನ್ನು ಸ್ವೀಕರಿಸಿದ್ದು, ಹಿಂದೂಗಳಿಗೆಲ್ಲಾ ವಿಷಾದದ ಸಂಗತಿ. ಇನ್ನು ಮುಂದೆ ಹೀಗಾಗದಂತೆ, ಹಿಂದೂ ಧರ್ಮ ರಕ್ಷಣೆ ಮಾಡಬೇಕೆಂದು ಊರಿನ ಮುಖ್ಯಸ್ಥರು ಶ್ರೀಮಾನ್ ನಾಗೇಶರಾಯರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದರು.” ಎಂದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು!!!  
                                            
ಅವಳ ಭಾಗ್ಯ : ಜಮೀನ್ದಾರರ ಮಗ ಕಿಟ್ಟಣ್ಣನ ಮದುವೆಯಲ್ಲಿ ಪಾರೂಳದ್ದೇ ಕಾರುಬಾರು. ಪಾರೂ ಅದು ಮಾಡೆ, ಇದು ಮಾಡೆ, ಎಂದು ಎ¯್ಲರೂ ಅವಳಿಂದ ಕೆಲಸ ಮಾಡಿಸುವವರೇ. ಮುಗ್ಧೆ ಪಾರೂ ಎಲ್ಲವನ್ನೂ  ಬೇಜಾರಿಲ್ಲದೆ ಮಾಡುತ್ತಿದ್ದಳು.  ಪಾರೂ ಬಡ ಗುಮಾಸ್ತರ ಮಗಳು. ನೋಡಲು ಸುಂದರಿಯೇನಲ್ಲ, 15 ವರ್ಷದ ಈ ಬಾಲೆಯನ್ನು ಎಲ್ಲರೂ ಕುರೂಪಿ ಎಂದೇ ಗುರುತಿಸುತ್ತಿದ್ದರು. ಸೌಂದರ್ಯವಿಲ್ಲದಿದ್ದರೇನು ಪಾರುವಿಗೆ ಒಳ್ಳೆಯ ಕಂಠ ಸಿರಿಯಿತ್ತು. ಅವಳು ಹಾಡದ ಹೊರತು ಮದುವೆ ಮನೆಯಲ್ಲಿ ಯಾವ ಕಾರ್ಯಗಳೂ ನಡೆಂiÀiುತ್ತಿರಲಿಲ್ಲ. ಅಂತಹ ಒಳ್ಳೆಯ ಹಾಡುಗಾರ್ತಿ. ಗುಣ ಹಾಗು ವ್ಯಕ್ತಿತ್ವದಲ್ಲಿ ಯಾವ ಕೊರತೆಯೂ ಇರದ ಪಾರುವಿಗೆ ವರದಕ್ಷಿಣೆಯ ದೆಸೆಯಿಂದ ಇನ್ನೂ ಮದುವೆಯಾಗಿರಲಿ¯್ಲ. ಇವಳ ರೂಪವನ್ನು ಕಂಡು ಭಾರೀ ವರದಕ್ಷಿಣೆ ಇಲ್ಲದೆ ಯಾರೂ ಇವಳನ್ನು ಮದುವೆಯಾಗಲು ಮುಂದೆ ಬರುವುದಿಲ್ಲ ಎಂಬುದು ಎಲ್ಲರ ಅಭಿಮತ. ಅಂತಹುದರಲ್ಲಿ ಪಾರುವಿಗೆ ಮದುವೆಯಾದ ಸುದ್ದಿ ತಿಳಿದ ಹಿತೈಷಿಯೊಬ್ಬರು ವರನ ವಿವರಗಳನ್ನು ವಿಚಾರಿಸಿದಾಗ ಆತನೊಬ್ಬ ಶ್ರೀಮಂತ ಕ್ಷಯ ರೋಗಿ, ಬಿಡಿಗಾಸೂ ವರದಕ್ಷಿಣೆ ಪಡೆಯದೇ ಪಾರುವನ್ನು ಮದುವೆಯಾದನೆಂದೂ, ಪಾರೂ ಆತನ ಸೇವೆ ಮಾಡಿಕೊಂಡಿರಬೇಕು ಅಷ್ಟೇ, ಮತ್ಯಾವುದಕ್ಕೂ ಕೊರತೆ ಇಲ್ಲ ಎಂದು ತಿಳಿದು, ನಿಜಕ್ಕೂ ಇದು ‘ಅವಳ ಭಾಗ್ಯ’ ಎಂದು ಮರುಗುತ್ತಾರೆ. 

ಗೌರಮ್ಮನವರ ಕಥೆ ಹೇಳುವ ರೀತಿ
ಈ ಮೇಲ್ಕಂಡ ಕಥಾಹಂದರಗಳನ್ನು ಓದಿದಾಗ ನಮ್ಮ ಗಮನಕ್ಕೆ ಬರುವುದು ಮಹಿಳೆಯರ ಸಮಸ್ಯೆಗಳ ಬಗೆಗಿನ ಚಿತ್ರಣ. ಹೌದು ಇಂದಿಗೂ ಮಹಿಳೆ ಒಂದಲ್ಲ ಒಂದು ರೀತಿಯಲ್ಲಿ ಪುರುಷರ ದೌರ್ಜನ್ಯಕ್ಕೆ ಸಿಕ್ಕಿ ಬಳಲುತ್ತಿದ್ದಾಳೆ. ಸಮಾಜದಲ್ಲಿನ ವರದಕ್ಷಿಣೆ ಪಿಡುಗು, ಬಾಲ್ಯ ವಿವಾಹ, ವಿಧವೆಯರ ಸಮಸ್ಯೆಗಳು, ಹೆಣ್ಣಿಗೆ ಮಾತ್ರ ಅನ್ವಯಿಸುವ ಜಾತಿ ಪದ್ಧತಿಗಳ ವಿರುದ್ಧ ಜನರು ಜಾಗೃತಗೊಳ್ಳುವಂತೆ ಮಾಡುವ ಶಕ್ತಿ ಶ್ರೀಮತಿ ಗೌರಮ್ಮನವರ ಬರವಣಿಗೆಯಲ್ಲಿದೆ. ಕೊಡಗಿನ ಗೌರಮ್ಮ ಎಂದೇ ಹೆಸರಾದ ನವೋದಯ ಹಂತದ ಲೇಖಕಿಯವರಾದ ಇವರು ಬರೆದಿರುವ “ಕಂಬನಿ ಮತ್ತು ಚಿಗುರು” ಎಂಬ ಕಥಾ ಸಂಕಲನದಿಂದ ಮೀಲಿನ ಮೂರೂ ಕಥೆಗಳನ್ನು ಆರಿಸಿಕೊಂಡಿದ್ದೇವೆ. ಇಂತಹ ಹಲವಾರು ಮಹಿಳೆಯರ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಕಥೆಗಳು ಗೌರಮ್ಮನವರ ಈ ಪುಸ್ತಕದಲ್ಲಿ ಅಡಕವಾಗಿವೆ. ಇವರ ಕಥೆಗಳು ಹೆಚ್ಚಾಗಿ ನಾಯಕಿ ಪ್ರಧಾನ ಹಾಗೂ ದುರಂತ ಕಥೆಗಳಾಗಿವೆ. ದುರಂತ ಕಥೆಗಳ ಮೂಲಕ ಓದುಗರಲ್ಲಿ ವಿಚಾರ ಮೂಡಿಸುವುದು ಇವರ ಧೋರಣೆಯಾಗಿತ್ತು. ಅವರ ಕಥಾನಾಯಕಿಯರು  ಸಮಸ್ಯೆಗೆ ಸಿಲುಕಿ ಆಹುತಿಯಾದುದೂ ಉಂಟು, ಸಮಸ್ಯೆಯಿಂದ ಹೊರಬಂದು ದಿಟ್ಟತನದಿಂದ ಹೊಸ ಬಾಳ್ವೆಗೆ ಮುನ್ನುಡಿ ಬರೆದುದೂ ಉಂಟು. ಹಾಗಾಗಿ ಈ ಪುಸ್ತಕಕ್ಕೆ ‘ಕಂಬನಿ ಮತ್ತು ಚಿಗುರು’ ಬಹಳವಾಗಿ ಒಪ್ಪುತ್ತದೆ. ಗೌರಮ್ಮನವರು ‘ಅಪರಾಧಿ ಯಾರು?’ ಎಂಬ ಕಥೆಯಲ್ಲಿ ಪತ್ರಗಳ ಮೂಲಕ ಕಥೆಯನ್ನು ಓದುಗರ ಮುಂದಿಟ್ಟು, ಬರವಣಿಗೆಯಲ್ಲಿ ಹೊಸ ಪ್ರಯೋಗವನ್ನು ಮಾಡಿ ಯಶಸ್ವಿಯಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ತಮ್ಮ ಈ ಪುಸ್ತಕವನ್ನು ಸಮಾಜಕ್ಕೆ ಹಾಗು ಸಾಹಿತ್ಯ ಲೋಕಕ್ಕೆ ಅರ್ಪಿಸಿದ ಇವರು ಅತಿ ಚಿಕ್ಕ ವಯಸ್ಸಿಗೆ ಅಕಾಲ ಮೃತ್ಯುವಿಗೆ ತುತ್ತಾದರು. ಗೌರಮ್ಮನವರ ಕಥಾಶೈಲಿ ನಿಜಕ್ಕೂ ಬಹಳ ಸುಂದರವಾಗಿದೆ. ಒಂದು ಕಥೆ ಹೇಳುವಂತೆ ಇನ್ನೊಂದು ಕಥೆಯನ್ನು ಹೇಳಿಲ್ಲ. ಅವರ ಭಾಷೆಯೂ ಸಹ ಸರಳವಾಗಿದ್ದು, ಓದುಗರನ್ನು ತಲ್ಲೀನರಾಗುವಂತೆ ಮಾಡುತ್ತದೆ. ಒಂದೇ ಬಾರಿ ಓದಬೇಕೆನಿಸುವಂತಹ ರೀತಿಯಲ್ಲಿ ಅವರು ಕಥೆಗಳನ್ನು ಬರೆದಿದ್ದರೂ ಅವರ ಕಥೆಗಳು ಓದುಗರ ಮನಸ್ಸಿನಲ್ಲಿ ಪ್ರಶ್ನೆಗಳನ್ನೆಬ್ಬಿಸುವುದರಿಂದ, ಆ ಕಥೆಗಳನ್ನು ಒಂದೇ ಬಾರಿ ಓದಲಾಗುವುದಿಲ್ಲ. ಆದರೆ ಆ ಪುಸ್ತಕವನ್ನು ಮುಗಿಸುವವರೆಗೂ ಬೇರೆ ಪುಸ್ತಕವನ್ನು ಕೈಗೆತ್ತಿಕೊಳ್ಳದಂತೆ ಮಾಡುವ ಮೋಡಿಯಿದೆ ಆ ಪುಸ್ತಕದಲ್ಲಿ. ಓದಿ ಮುಗಿಸಿದ ಪ್ರತಿಯೊಬ್ಬರು ಹೆಣ್ಣಿನ ಬಗ್ಗೆ ಅಂತಃಕರಣವನ್ನು ಬೆಳೆಸಿಕೊಳ್ಳುವುದರಲ್ಲಿ ಯಾವ ಸಂಶಯವೂ ಇಲ್ಲ. 
     – ದೀಪಶ್ರೀ ಜೆ

No comments:

Post a Comment