ಯಾರು ಹೆಚ್ಚು?
ಒಮ್ಮೆ ಗಾಳಿ ಸೂರ್ಯನೊಂದಿಗೆ ತಾನೇ ದೊಡ್ಡವನೆಂದು ವಾದ ಮಾಡತೊಡಗಿತು. ಸೂರ್ಯ ಹೇಳಿತು, ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ದೊಡ್ಡವರೇ ಎಂದಿತು. ಆದರೆ ಗಾಳಿ ಕೇಳಿಸಿಕೊಳ್ಳಲು ಸಿದ್ಧವಿರಲಿಲ್ಲ. ಪಂದ್ಯಕ್ಕೆ ಆಹ್ವಾನಿಸಿತು. ಸರಿ ಎಂದಿತು ಸೂರ್ಯ. ದಾರಿಯಲ್ಲಿ ಓರ್ವ ವ್ಯಕ್ತಿ ಶಾಲ್ ಹೊದ್ದುಕೊಂಡು ನಡೆಯುತ್ತಿದ್ದ. ಅ ವ್ಯಕ್ತಿಯಿಂದ ಯಾರು ಶಾಲ್ ಅನ್ನು ಬೇರ್ಪಡಿಸುವರೋ ಅವರೇ ಬಲಶಾಲಿ ಎಂದು ನಿರ್ಧಾರಿತವಾಯಿತು. ಗಾಳಿ ತನ್ನೆಲ್ಲ ಶಕ್ತಿ ಮೀರಿ ಬೀಸಿತು. ಆದರೆ ಆ ವ್ಯಕ್ತಿ ಶಾಲ್ ಅನ್ನು ಇನ್ನಷ್ಟು ಭದ್ರವಾಗಿ ಸುತ್ತಿಕೊಂಡನಷ್ಟೇ.. ನಂತರ ಸೂರ್ಯನ ಸರದಿ. ಸೂರ್ಯ ತನ್ನ ತಾಪವನ್ನು ಸ್ವಲ್ಪ ಹೆಚ್ಚಿಸಿತು. ಸ್ವಲ್ಪ ಹೊತ್ತಾದ ಮೇಲೆ ಆ ವ್ಯಕ್ತಿ ಶಾಲ್ ತೆಗೆದುಬಿಟ್ಟ. ಗಾಳಿ ತಾನು ಸೋತೆನೆಂದು ಒಪ್ಪಿಕೊಂಡಿತು.
ಬಿತ್ತಿದಂತೆಯೇ ಬೆಳೆಯುತ್ತೇವೆ.
ಮೂವರು ಕಳ್ಳರು ಸಂಪತ್ತನ್ನು ಕದ್ದರು. ಹಸಿವಾಯಿತೆಂದು ಒಬ್ಬ ಊಟ ತರಲು ಹೋದ. ಉಳಿದ ಇಬ್ಬರು ಕಳ್ಳರು ಹಿಂತಿರುಗಿದಾಗ ಅವನನ್ನು ಹೊಡೆದು ಕೊಂದರು. ಆ ಊಟ ತರಲು ಹೋಗಿದ್ದ ಕಳ್ಳ ಇವರಿಬ್ಬರನ್ನು ಸಾಯಿಸಿ ಗಂಟು ಹೊಡೆಯಲು, ಊಟದಲ್ಲಿ ವಿಷ ಬೆರೆಸಿದ್ದ. ಅದನ್ನು ತಿಂದ ಅವರು ಸತ್ತರು. ಕೆಟ್ಟದ್ದನ್ನು ಮಾಡಿ ಒಳ್ಲೆಯದ್ದನ್ನು ಪಡೆಯಲು ಸಾಧ್ಯವಿಲ್ಲ.
ಕಾಲ ಅಮೂಲ್ಯ
ಹುಡುಗನೊಬ್ಬನಿಗೆ ಕಾಲದ ಅರಿವೇ ಇರಲಿಲ್ಲ, ಎಷ್ಟು ಹೇಳಿದರೂ ಸಮಯಕ್ಕೆ ಸರಿಯಾಗಿ ಕೆಲಸ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಲಿಲ್ಲ. ಒಂದು ದಿನ ಅವನಿಗೆ ಹಾಡುವುದರಲ್ಲಿ ಮೊದಲ ಬಹುಮಾನ ಬಂದಿದೆ ಎಂದು ಗೊತ್ತಾಯಿತು. ಆದರೆ ಸೋಮಾರಿತನದಿಂದ ಅವನು ೨ ದಿನ ಬಿಟ್ಟು ಹೋದ. ಆದರೆ ಅವನಿಗೆ ಆ ಬಹುಮಾನದಿಂದ ಏನು ಉಪಯೋಗವಾಗಲಿಲ್ಲ, ಏಕೆಂದರೆ ಅದು ಹಿಂದಿನ ದಿನದ ಸರ್ಕಸ್ ಶೋನ ಟಿಕೆಟ್ ಆಗಿತ್ತು!!
ಮೋಸಕ್ಕೆ ತಕ್ಕ ಶಾಸ್ತಿ
ತೋಳವೊಂದಕ್ಕೆ, ಒಂದು ದಿನ ಕುರಿಚರ್ಮ ಸಿಕ್ಕಿತು. ತೋಳ ಅದನ್ನು ಹೊದ್ದುಕೊಂಡು ಕುರಿಯ ಹಿಂಡಿನಲ್ಲಿ ಸೇರಿಕೊಂಡು ಕುರಿಗಳನ್ನು ತಿನ್ನಲು ಹೊಂಚು ಹಾಕಿತು. ಅಂದೇ ಕುರಿ ಮಂದೆಯ ಯಜಮಾನನ ಮನೆಯಲ್ಲಿ ಕಾರ್ಯಕ್ರಮ ಇದ್ದುದ್ದರಿಂದ, ಎಲ್ಲಕ್ಕಿಂತ ದಷ್ಟಪುಷ್ಟವಾದ ಕುರಿಯನ್ನು ಕತ್ತರಿಸಲು ತೀರ್ಮಾನಿಸಲಾಯಿತು. ಆಳು ಬಂದು ಕುರಿಯ ಹೊದಿಕೆಯಲ್ಲಿದ್ದ ತೋಳವನ್ನು ತೆಗೆದುಕೊಂಡು ಕತ್ತರಿಸಿದ. ಎಲ್ಲರೂ ಆ ಮಾಂಸದಿಂದ ತಯಾರಿಸಿದ ಊಟವನ್ನು ಸಂತೋಷವಾಗಿ ತಿಂದರು.
ಅಮ್ಮನ ದಿನ
ವ್ಯಕ್ತಿಯೊಬ್ಬ ಮಾತೆಯರ ದಿನದಂದು ತಾಯಿಗೆ ಶುಭಾಶಯ ಕಳಿಸಲು ಹೂವಿನಂಗಡಿ ಒಂದಕ್ಕೆ ಹೋಗಿ ಅಲ್ಲಿಂದ ತಾಯಿಯ ವಿಳಾಸ ಕೊಟ್ಟು ಅಲ್ಲಿಗೆ ಹೂ ಕಳಿಸಲು ಹೇಳಿದ. ಅವನು ಅಲ್ಲಿಯೇ ಹೊರಗಡೆ ಮೆಟ್ಟಿಲಿನ ಮೇಲೆ ಕುಳಿತು ಅಳುತ್ತಿದ್ದ ಹುಡುಗಿಯನ್ನು ನೋಡಿದ. ಕಾರಣವನ್ನು ಕೇಳಿದ. ಅವಳು, “ನನ್ನ ತಾಯಿಗೆ ಹೂ ಕೊಡಬೇಕು ಆದರೆ ನನ್ನ ಬಳಿ ೭೫ ಸೆಂಟ್ಸ್ ಮಾತ್ರ ಇದೆ, ಆದರೆ ಆ ಹೂ ೨ ಡಾಲರ್ ಆಗುತ್ತದೆ” ಎಂದಳು. ಅವನು “ಅವಳಿಗೆ ಹೂ ಕೊಂಡುಕೊಟ್ಟು, ನಡಿ ನಿನ್ನನ್ನು ಬಿಟ್ಟು ಬರುತ್ತೇನೆ” ಎಂದ. ಅವಳವನನ್ನು ಅಲ್ಲಿಯೇ ಇದ್ದ ಸ್ಮಶಾನಕ್ಕೆ ಕರೆದೊಯ್ದು, ತಾಯ ಸಮಾಧಿಯ ಮೇಲೆ ಹೂ ಇಟ್ಟಳು. ಇದನ್ನು ಕಂಡ ಆ ವ್ಯಕ್ತಿಯ ಕಣ್ಣು ತೇವವಾಯಿತು. ಅಲ್ಲಿಂದ ಆತ ಆ ಹೂ ಅಂಗಡಿಗೆ ತೆರಳಿದ – ತಾನಿತ್ತ ಹೂವಿನ ಆರ್ಡರ್ ಬೇಡವೆಂದು ಹೇಳಿ, ಹೂವಿನೊಂದಿಗೆ ೨೦೦ ಮೈಲಿ ದೂರದಲ್ಲಿದ್ದ ತಾಯ ಮನೆಗೆ ಹೊರಟ!
ಕಲ್ಲು ಮತ್ತು ಮರಳು
ಇಬ್ಬರು ಸ್ನೇಹಿತರಿದ್ದರು. ರಮೇಶ, ಸುರೇಶ ಎಂದುಕೊಳ್ಳೋಣ. ಒಮ್ಮೆ ರಮೇಶನಿಗೆ ಕೋಪ ಬಂದು ಸುರೇಶನನ್ನು ಹೊಡೆದುಬಿಟ್ಟ. ಸುರೇಶ ಮರಳಿನ ಮೇಲೆ “ಇಂದು ನನ್ನ ಸ್ನೇಹಿತನಿಗೆ ಕೋಪ ಬಂತು, ಅದಕ್ಕೆ ನನ್ನನ್ನು ಹೊಡೆದ” ಎಂದು ಬರೆದ. ಅಲ್ಲಿಯೇ ಈಜಾಡುವಾಗ ಸುರೇಶ ನೀರಿನಲ್ಲಿ ಮುಳುಗಿಬಿಟ್ಟ. ರಮೇಶ ತಕ್ಷಣವೇ ನೀರಿಗೆ ಬಿದ್ದು, ಸುರೇಶನ ಜೀವವನ್ನು ಕಾಪಾಡಿದ. ಆಗ ಸುರೇಶ ಅದನ್ನು ಕಲ್ಲಿನ ಮೇಲೆ ಬರೆದ, “ಇಂದು ನನ್ನ ಗೆಳೆಯ ನನ್ನ ಜೀವವನ್ನು ಉಳಿಸಿದ”. ರಮೇಶ “ಒಂದನ್ನು ಕಲ್ಲಿನ ಮೇಲೆ ಬರೆದೆ, ಇನ್ನೊಂದನ್ನು ಮರಳಿನ ,ಮೇಲೆ ಬರೆದೆ, ಯಾಕೆ?” ಕೇಳಿದ. ಅದಕ್ಕೆ ಸುರೇಶ ಉತ್ತರ ಕೊಟ್ಟಿದ್ದು “ನಮ್ಮನ್ನು ಯಾರಾದರೂ ನೋಯಿಸಿದರೆ ಅದನ್ನು ಮರಳಿನ ಮೇಲೆ ಬರೆದರೆ, ಕ್ಷಮೆ ಎಂಬ ಗಾಳಿಯ ಮೂಲಕ ಅದು ಅಳಿಸಿಹೋಗುತ್ತದೆ. ಆದರೆ ನಮಗೆ ಯಾರಾದರೂ ಒಳ್ಳೆಯದನ್ನು ಮಾಡಿದಾಗ ಅದನ್ನು ಯಾವ ಗಾಳಿಯೂ ಅಳಿಸದಂತೆ ಕಲ್ಲಿನ ಮೇಲೆ ಬರೆಯಬೇಕು” ಎಂದ.
ಎರಡು ಕಪ್ಪೆಗಳು.
ಒಮ್ಮೆ ಎರಡು ಕಪ್ಪೆಗಳು ಮೊಸರಿನ ಗಡಿಗೆಗೆ ಬಿದ್ದುಹೋದವು. ಎರಡೂ ಕಪ್ಪೆಗಳಿಗೆ ತಾವು ಅದರಲ್ಲಿ ಮುಳುಗಿ ಸಾಯುತ್ತೇವೆ ಎಂದು ಭಯವಾಯಿತು. ಒಂದು ಕಪ್ಪೆ ಆ ಭಯದಲ್ಲಿಯೇ, ಏನೂ ಪ್ರಯತ್ನಿಸದೆ ಮೊಸರಿನಲ್ಲಿ ಮುಳುಗಿ ಸತ್ತುಹೋಯಿತು. ಆದರೆ, ಇನ್ನೊಂದು ಕಪ್ಪೆ ಮಾತ್ರ ಧೈರ್ಯಗೆಡದೆ ಈಜಲಾರಂಭಿಸಿತು. ಅದು ಸತತವಾಗಿ ಕಾಲುಗಳನ್ನು ಆಡಿಸುತ್ತಿದ್ದರಿಂದ, ಮೊಸರು ಹೆಪ್ಪುಗಟ್ಟಿ ಬೆಣ್ಣೆ ಬಂದಿತು. ತಕ್ಷಣವೇ ಕಪ್ಪೆ ಆ ಬೆಣ್ಣೆಯ ಮೇಲೆ ಜಿಗಿದು, ಗಡಿಗೆಯಿಂದ ಆಚೆ ಬಂದಿತು, ತನ್ನ ಜೀವವನ್ನು ಉಳಿಸಿಕೊಂಡಿತು.
No comments:
Post a Comment