ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಣಿ ಕಲ್ಪನಾ ದತ್ತಾ
ಭಾರತ ಸ್ವಾತಂತ್ಯ ಸಂಗ್ರಾಮದಲ್ಲಿ “ಚಿತ್ತಗಾಂಗ್ ಸಮರ” ಒಂದು ಮೈಲಿಗಲ್ಲು. ಮಾಸ್ಟರ್ ದಾ ಎಂದೇ ಪ್ರಸಿದ್ಧರಾದ ಸೂರ್ಯಸೇನ್ ರವರ ನೇತ್ರುತ್ವದಲ್ಲಿ ನಡೆದ ಆ ಹೋರಾಟದಲ್ಲಿ ಭಾಗಿಯಾದವರಲ್ಲಿ ಇಬ್ಬರು ಯುವತಿಯರ ಹೋರಾಟ ಅವಿಸ್ಮರಣೀಯ. ಏಕೆಂದರೆ, ಬ್ರಿಟಿಷ್ ದಬ್ಬಾಳಿಕೆ-ದೌರ್ಜನ್ಯಗಳಿಗೇ ಪುರುಷರೇ ಹೆದರಿ ನಡುಗುತ್ತಿದ್ದ ಸಮಯದಲ್ಲಿ ಈ ಈರ್ವರು ಮಹಿಳೆಯರು ಪುರುಷ ಕ್ರಾಂತಿಕಾರಿಗಳಿಗೆ ಸರಿಸಮನಾಗಿ ನಿಂತು ಹೋರಾಟ ನಡೆಸಿದರು. ಪ್ರೀತಿಲತಾ ವದೆದ್ದಾರ್ ಮತ್ತು ಕಲ್ಪನಾ ದತ್ತಾ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಹಿಂದಿರಬೇಕಿಲ್ಲ ಎಂಬುದನ್ನು ನಾರಿ ಸಮುದಾಯಕ್ಕೆ, ಸಮಾಜಕ್ಕೆ ತೋರಿಸಿಕೊಟ್ಟರು.
ಕಲ್ಪನಾರವರ ಜನನವಾಗಿದ್ದು ಅವಿಭಜಿತ ಬಂಗಾಳದ ಚಿತ್ತಗಾಂಗ್ ಜಿಲ್ಲೆಯ ಶ್ರೀಪುರದಲ್ಲಿ (ಇಂದು ಈ ಸ್ಥಳ ಬಾಂಗ್ಲಾದೇಶದಲ್ಲಿದೆ) ೧೯೧೩ರ ಜುಲೈ ೨೭ರಂದು ಜನಿಸಿದ ಇವರು ೧೯೨೯ರಲ್ಲಿ ಮೆಟ್ರಿಕುಲೇಷನ್ ಪರೀಕ್ಷೆ ಪಾಸಾದ ನಂತರ ವಿಜ್ಞಾನದಲ್ಲಿ ಪದವಿ ಪಡೆಯಲು, ಕಲ್ಕತ್ತಾದ ಬೆಥೂನ್ ಕಾಲೇಜಿಗೆ ಸೇರಿದರು. ಅಲ್ಲಿ ಛಾತ್ರಿ ಸಂಘವನ್ನು (ವಿದ್ಯಾರ್ಥಿನಿಯರ ಸಂಘ) ಸೇರಿದರು. ಬೀನಾ ದಾಸ್ ಮತ್ತು ಪ್ರೀತಿಲತಾ ವದೆದ್ದಾರ್ ಸಕ್ರಿಯರಾಗಿದ್ದ ಅರೆ ಕ್ರಾಂತಿಕಾರಕ ಸಂಘಟನೆಯದು. ನಂತರ ಚಿತ್ತಗಾಂಗ್ ಗೆ ಹಿಂದಿರುಗಿದ ಅವರು ೧೯೩೧ ರ ಮೇಯಲ್ಲಿ ಸೂರ್ಯಸೇನ್ ರ ಇಂಡಿಯನ್ ರಿಪಬ್ಲಿಕನ್ ಆರ್ಮಿ ಯ ಚಟ್ಟಗ್ರಾಮ್ ವಿಭಾಗವನ್ನು ಸೇರಿದರು. ಸಶಸ್ತ್ರ ಸ್ವಾತಂತ್ರ್ಯ ಹೋರಾಟ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಬಲ್ಲದು ಎಂದು ನಂಬಿದ್ದ ಸಂಘಟನೆಯದು. ಕ್ರಾಂತಿಕಾರಿಗಳ ನಡುವೆ ಸಂದೇಶಗಳನ್ನು ರವಾನಿಸಲು, ಬಾಂಬ್ ತಯಾರಿಸಲು, ಬ್ರಿಟಿಷರ ಮೇಲೆ ದಾಳಿ ಮಾಡುವಲ್ಲಿ ಸಕ್ರಿಯವಾಗಿ ಪಾಲ್ಗೊಂಡಳು.
ಅಂದಿನ ದಿನಗಳಲ್ಲಿ ಬ್ರಿಟಿಷರು ಭಾರತೀಯರನ್ನು ಹೀನಾಯವಾಗಿ ಕಾಣುತ್ತಿದ್ದರು. ಚಿತ್ತಗಾಂಗ್ ನಲ್ಲಿದ್ದ ಯೂರೋಪಿಯನ್ ಕ್ಲಬ್ ನ ಹೊರಗೆ “ಭಾರತೀಯರಿಗೆ ಹಾಗೂ ನಾಯಿಗಳಿಗೆ ಇಲ್ಲಿ ಪ್ರವೇಶವಿಲ್ಲ” ಎಂದು ಬರೆಯಲಾಗಿತ್ತು. ಬ್ರಿಟಿಷರ ಅಹಂಕಾರವನ್ನು ಮಟ್ಟಹಾಕಲು, ಅವರಿಗೊಂದು ಪಾಠವನ್ನು ಕಲಿಸಲು ಯೂರೋಪಿಯನ್ ಕ್ಲಬ್ ಮೇಲೆ ದಾಳಿ ಮಾಡಲು ನಿರ್ಧರಿಸಲಾಯಿತು. ಆ ಕೆಲಸವನ್ನು ಸೂರ್ಯಸೇನ್ ರವರು ಕಲ್ಪನಾ ಮತ್ತು ಪ್ರೀತಿಲತಾರಿಗೆ ಸೆಪ್ಟೆಂಬರ್ ೧೯೩೧ ರಲ್ಲಿ ವಹಿಸಿದರು. ಆದರೆ ದಾಳಿಗೆ ಒಂದು ವಾರಕ್ಕೆ ಮುಂಚೆ, ಆ ಸ್ಥಳದ ಪರೀಶೀಲನೆ ನಡೆಸುವಾಗ ಇಬ್ಬರನ್ನು ಬಂಧಿಸಲಾಯಿತು. ಬೇಲ್ ಮೇಲೆ ಆಚೆ ಬಂದ ನಂತರ ಇಬ್ಬರೂ ಕಣ್ಮರೆಯಾದರು. ಪ್ರೀತಿಲತಾ ಯೂರೋಪಿಯನ್ ಕ್ಲಬ್ ನ ದಾಳಿಯಲ್ಲಿ ಪೋಲಿಸರ ಗುಂಡೇಟಿಗೆ ಬಲಿಯಾದರು, ಭಾರತ ಸ್ವಾತಂತ್ರ್ಯ ಹೋರಾಟದ ಮೊದಲ ಮಹಿಳಾ ಹುತಾತ್ಮರೆಂಬ ಗೌರವಕ್ಕೆ ಪಾತ್ರರಾದರು. ೧೯೩೩ರ ಫ಼ೆಬ್ರವರಿ ೧೭ರಂದು ಪೊಲೀಸರು ಕ್ರಾಂತಿಕಾರಿಗಳ ಅಡುಗುದಾಣದ ಮೇಲೆ ದಾಳಿ ಮಾಡಿದರು, ಸೂರ್ಯಸೇನ್ ರವರನ್ನು ಬಂಧಿಸಿದರು, ಆದರೆ ಕಲ್ಪನಾ ಅಲ್ಲಿಂದ ತಪ್ಪಿಸಿಕೊಂಡರು. ಆದರೆ, ಅವರನ್ನು ೧೯೩೩ರ ಮೇ ೧೯ರಂದು ಬಂಧಿಸಲಾಯಿತು. ಚಿತ್ತಗಾಂಗ್ ಶಸ್ತ್ರಾಗಾರ ದಾಳಿಯ ಎರಡನೆಯ ವಿಚಾರಣೆಯಲ್ಲಿ ಅವರನ್ನು ಜೀವಾವಧಿ ಶಿಕ್ಷೆಗೆ ಒಳಪದಿಸಲಾಯಿತು. ಆದರೆ, ೧೯೩೯ರಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು.
ಜೈಲಿನಲ್ಲಿದ್ದಾಗ ಮಾರ್ಕ್ಸ್ ವಾದದೆಡೆ ಆಕರ್ಷಿತರಾದ ಅವರು, ೧೯೩೯ರಲ್ಲಿ ಬಿಡುಗಡೆಯಾದ ನಂತರ ಕಮ್ಯೂನಿಸ್ಟ್ ಪಕ್ಷಕ್ಕೆ ಸೇರಿಕೊಂಡರು. ೧೯೪೦ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯಕ್ಕೆ ಸೇರಿದ ಅವರು ಪದವಿ ಪಡೆದರು. ೧೯೪೩ ರಲ್ಲಿ ಪಕ್ಷದ ನಾಯಕರಲ್ಲೊಬ್ಬರಾದ ಪಿ ಸಿ ಜೋಷಿಯವರನ್ನು ವಿವಾಹವಾದರು. ೧೯೪೩ರಲ್ಲಿ ಬಂಗಾಳದ ಬರಗಾಲದ ಸಮಯದಲ್ಲಿ ಮತ್ತು ಬಂಗಾಳ ವಿಭಜನೆಯ ಸಮಯದಲ್ಲಿ ಸ್ವಯಂಸೇವಕಿಯಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ ಕೆಲಸ ನಿರ್ವಹಿಸಿದರು. ಅವರು ತಮ್ಮ ಹೋರಾಟದ ಚರಿತ್ರೆಯನ್ನು “ಚಿತ್ತಗಾಂಗ್ ಆರ್ಮರಿ ರೈಡರ್ಸ್ ; ರೆಮಿನಿಸೆನ್ಸಸ್” (ಚಿತ್ತಗಾಂಗ್ ಶಸ್ತ್ರಾಗಾರ ದಾಳಿಕಾರರು :ನೆನಪುಗಳು) ಎಂಬ ಹೆಸರಿನಲ್ಲಿ ಬರೆದರು. ಅದು ೧೯೪೫ರಲ್ಲಿ ಇಂಗ್ಲಿಷ್ ನಲ್ಲಿ ಪ್ರಕಟವಾಯಿತು. ಅದರಲ್ಲೊಂದೆಡೆ ಅವರು ತಮ್ಮ ಹೋರಾಟವನ್ನು ಸಮರ್ಥಿಸಿಕೊಳ್ಳುತ್ತಾ ಹೀಗೆ ಬರೆದಿದ್ದಾರೆ : “ಬಂಡಾಯಗಳು ಯಾವಾಗಲೂ ಆಳುವ ವರ್ಗದ ವಿರುದ್ಧವಿರುತ್ತದೆ, ಆದರೆ ಅದು ಸಂವಿಧಾನ ಬಾಹಿರವೇ? ಕೆಲವರು ವಿದೇಶಿ ಆಳ್ವಿಕೆಯನ್ನು ತಿರಸ್ಕರಿಸಬಹುದು, ಆದರೆ ಅದು ಅನ್ಯಾಯವೇ? ಇನ್ನೊಬ್ಬರು ನಮ್ಮ ದೇಶವನ್ನು ಆಕ್ರಮಿಸಿದಾಗ, ಇಲ್ಲಿ ನಡೆಯುವ ಎಲ್ಲಾ ಸರ್ಕಾರಿ ವಿರೋಧಿ ಚಟುವಟಿಕೆಗಳು ಆಳುವ ವರ್ಗಕ್ಕೆ ದೇಶದ್ರೋಹವಾಗಿಯೇ ಕಾಣಿಸುತ್ತದೆ. ಆದರೆ, ಈ ನೆಲದ ಜನರಿಗೆ ಮಾತ್ರ ಸರ್ಕಾರದ ದಬ್ಬಾಳಿಕೆಯನ್ನು ತೊಡೆದುಹಾಕುವುದು, ಸ್ವರಾಜ್ಯವನ್ನು ಸ್ಥಾಪಿಸುವುದು ನ್ಯಾಯವಾಗಿಯೇ ಇರುತ್ತದೆ. ಈ ಹೋರಾಟವನ್ನು ನಾವು ಶಾಂತಿಯ ಮೂಲಕ ಪಡೆಯಲಾಗದು. ಯಾವ ದಮನಕಾರಿಯೂ ತನ್ನ ಅಧಿಕಾರವನ್ನು ಸ್ವಇಚ್ಛೆಯಿಂದ ಬಿಟ್ಟುಕೊಡಲಾರ. ಹಾಗಾಗಿ ನಮಗೆ ಸಶಸ್ತ್ರ ಹೋರಾಟದ ವಿಧಾನ ಬಿಟ್ಟರೆ ಅನ್ಯ ಮಾರ್ಗವಿರಲಿಲ್ಲ.”
ವಿಭಜನೆಗೆ ಮುನ್ನ ಮತ್ತು ನಂತರ ಅವರು ಬಾಂಗ್ಲಾದೇಶದಲ್ಲಿರುವ ತಮ್ಮ ಊರಿಗಾಗಿ ದುಡಿದರು. ಬಂಗಾಳದ ಬರಗಾಲದಲ್ಲಿ, ಸಮುದಾಯ ಅಡಿಗೆ ಮನೆ ಸ್ಥಾಪಿಸಿ ಹಸಿದವರಿಗೆ ಅನ್ನ ನೀಡಿದರು ಮತ್ತು ಚಿತ್ತಗಾಂಗ್ ನ ಹಳ್ಳಿಯ ರೋಗಗ್ರಸ್ತರಿಗೆ ವೈದ್ಯಕೀಯ ನೆರವನ್ನು ನೀಡಿದರು. ವಿಭಜನೆಯ ಸಮಯದಲ್ಲಿ, ಅವರು ಬಂಗಾಳ ಮತ್ತು ಬಾಂಗ್ಲಾದೇಶದಲ್ಲಿ ನೊಂದವರಿಗೆ ನೆರವು ನೀಡುವ, ಅವರನ್ನು ರಕ್ಷಿಸುವ ಕಾರ್ಯವನ್ನು ಕೈಗೊಂಡರು.
೧೯೪೬ರಲ್ಲಿ ಅವರು ಬಂಗಾಳ ಶಾಸನಸಭೆಗೆ ಸ್ಪರ್ಧಿಸಿದರು. ಆದರೆ ಗೆಲ್ಲಲ್ಲಾಗಲಿಲ್ಲ. ನಂತರ ಅವರು ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸಿಟಿಟ್ಯೂಟ್ ನಲ್ಲಿ ಕೆಲಸಕ್ಕೆ ಸೇರಿ, ನಿವೃತ್ತಿಯಾಗುವವರೆಗೆ ದುಡಿದರು. ವಿಭಜನೆಯಾದ ನಂತರ ತಮ್ಮ ಚಿತ್ತಗಾಂಗ್ ಅನ್ನು ಪ್ರೀತಿಸಿದರೂ, ಅವರು ಭಾರತದ ಜನರಿಗಾಗಿ ದುಡಿದರು. ಅವರು ದೇಶಪ್ರೇಮಿಯಾಗಿದ್ದರು, ಸಂಕುಚಿತ ರಾಷ್ಟ್ರೀಯತಾವಾದಿಯಾಗಿರಲಿಲ್ಲ. ತಮ್ಮ ನಂತರದ ಪೀಳಿಗೆಯವರೊಂದಿಗೆ ಅವರು ಚಿತ್ತಗಾಂಗ್ ನ ಪ್ರಕೃತಿ ಸೌಂದರ್ಯದ ಬಗ್ಗೆ, ಗಣಿತದ ಬಗೆಗಿನ ತಮ್ಮ ಪ್ರೀತಿಯ ಬಗ್ಗೆ, ತಮ್ಮ ಸಂಗಾತಿಗಳು, ಸ್ನೇಹಿತರು, ಹಾಡುಗಳು, ಸಾಹಸಗಳು, ಚುನಾವಣೆಯಲ್ಲಿನ ಅವರ ಸೋಲಿನ ಬಗ್ಗೆ ಮಾತನಾಡುತ್ತಿದ್ದರು. “೭೦ರ ವಯಸ್ಸಿನಲ್ಲಿಯೂ ಸರಳವಾಗಿದ್ದ ಕಲ್ಪನಾರವರು ತಮ್ಮ ಹೆಗಲಿಗೆ ಚೀಲವನ್ನು ಹಾಕಿಕೊಂಡು, ಡಿಟಿಸಿ ಬಸ್ ನಲ್ಲಿ ೨೦ ವರ್ಷದ ಯುವತಿಯಂತೆ ಓಡಾಡುತ್ತಿದ್ದರು. ಅವರ ಭುಜ ಹೊರಗಡೆ ಬಂದಿತ್ತು. ಆದರೆ ಆ ನೋವನ್ನು ನಗುತ್ತಲೇ ಸಹಿಸಿದರು. ಅವರೆಂದೂ ಕಣ್ಣೀರನ್ನು ಹಾಕುತ್ತಿರಲಿಲ್ಲ, ಸರಳ ಜೀವನಕ್ಕೆ ಒಗ್ಗಿದ್ದರು. ಅವರು ತಮ್ಮ ಮಕ್ಕಳಿಗೆ ಜೋಗುಳವನ್ನು ಹಾಡುವಾಗಲೂ ಟಾಗೋರ್ ರವರ “ಏಕ್ಲಾ ಚಲೋರೆ” (ಒಬ್ಬರೇ ನಡೆಯಿರಿ) ಹಾಡುತ್ತಿದ್ದರು. ಅನ್ನವನ್ನುಣಿಸುವಾಗ ಧೈರ್ಯ ಮತ್ತು ದೃಢತೆಯನ್ನು ಕಲಿಸಿಕೊಟ್ಟರು. ನಿಮ್ಮ ಭಯವನ್ನು ಮೀರಿ. ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ನಂಬಿ ಎಂಬುದನ್ನು ನಮಗೆ ಕಲಿಸಿದರು” ಎಂದು ಅವರ ಮಗಳು ಹೇಳಿದ್ದಾರೆ.
ತಮ್ಮ ಕೊನೆಯುಸಿರಿನವರೆಗೆ ಅವರು ದೇಶಕ್ಕಾಗಿ, ತುಳಿತಕ್ಕೊಳಪಟ್ಟ ಜನತೆಗಾಗಿ ದುಡಿಯುತ್ತಲೇ ಕಲ್ಕತ್ತಾದಲ್ಲಿ ೧೯೯೫ರ ಫೆಬ್ರವರಿಯ ೮ ರಂದು ತೀರಿಕೊಂಡರು. ಅವರ ಬದುಕು - ಹೋರಾಟಗಳು ನಮಗೆ ಎಂದೂ ಸಹ ಸ್ವಾತಂತ್ರ್ಯದ, ಜನಸೇವೆಯ ಪಾಠಗಳನ್ನು ಕಲಿಸುತ್ತಲೇ ಇರುತ್ತವೆ.
No comments:
Post a Comment